ಮಹಾ ಕೂಟ
ದಕ್ಷಿಣ ಕಾಶಿ ಎಂದು ಕರೆಸಿ ಕೊಳ್ಳುವ ಮಹಾಕೂಟ ದೇವಸ್ಥಾನವು ಬಾಗಲ ಕೋಟ ಜಿಲ್ಲೆಯ ಬದಾಮಿಯಿಂದ 13 ಕಿ. ಮೀ. ದೂರದಲ್ಲಿದೆ. ಸಾರಿಗೆ ಸಂಪರ್ಕ ತೀರ ಶೋಚನೀಯ. ಬೆಳಿಗ್ಗೆ ಒಂದು ಬಸ್, ಬಿಟ್ಟರೆ ಮಧ್ಯಾಹ್ನವೋ ಇಲ್ಲ ಸಂಜೆಯೋ ಪುನ: ಮತ್ತೊಂದು ಬಸ್ ಬರಬಹುದು. ಇಲ್ಲಿ ತಲುಪ ಬೇಕಾದರೆ ಆಟೋ ರಿಕ್ಷಾವೇ (ಇಲ್ಲಿನವರ ಮಾತಿನಲ್ಲಿ ’ಟಂ ಟಂ’) ಗತಿ. ಕಾಲ್ನಡಿಗೆಯಲ್ಲಿ ಹೋದರೆ ಕೇವಲ ನಾಲ್ಕು ಕಿ.ಮೀ. ಬದಾಮಿ ಕೋಟೆಯ ಒಳಗೆ ದಾರಿಯಿದೆ. ಆದರೆ, ಬೆಂಕಿ ಬಿಸಿಲಿನಲ್ಲಿ ನಡೆಯ ಬೇಕಾದರೆ ತುಂಬಾ stamina ಇರಬೇಕು.
ಇನ್ನು ದೇವಸ್ಥಾನ ಅಂತಹ ದೊಡ್ಡ ದೇವಸ್ಥಾನವೇನೂ ಅಲ್ಲ. ಆದರೆ, ದೇವಸ್ಥಾನದ ಪಕ್ಕದಲ್ಲೇ ಒಂದು ಸಣ್ಣ ಕಲ್ಯಾಣಿ ಇದೆ. ಮೊದಲು ದೇವಸ್ಥಾನದ ಮುಂದೆ ಇರುವ ನೀರಿನ ಹೊಳೆಯಲ್ಲಿ ಸ್ನಾನ ಮಾಡಿ ನಂತರ ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದರೆ, ಕಾಶಿಗೆ ಹೋಗಿ ದರ್ಶನ ಮಾಡಿದಷ್ಟೇ ಪುಣ್ಯ ಬರುತ್ತದಂತೆ. ಸ್ನಾನ ಮಾಡುವುದಾದರೆ ತಲಾ 2 ರೂಪಾಯಿ ಕೊಡಬೇಕು. ಅದನ್ನು ಉಳಿಸುವುದಕ್ಕಾಗಿ ತುಂಬಾ ಜನರು ಪಕ್ಕದ ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿರುವ ದೃಶ್ಯ ತುಂಬಾ ಮಜವಾಗಿತ್ತು. ಕಲ್ಯಾಣಿಯಲ್ಲಿ ಜನ ಮುಳುಗೇಳುವಾಗ ನೀರು ಅದಕ್ಕಾಗಿ ಮಾಡಿದ ಸಣ್ಣ ಮೋರಿಯಂತಿರುವ ಜಾಗದಿಂದ ಸ್ವಲ್ಪ ದೊಡ್ಡದಾದ ಚರಂಡಿಗೆ ಬರುತ್ತದೆ. ಅಲ್ಲಿಂದ ದೇವಸ್ಥಾನದ ಮುಂದಿರುವ ಹೊಳೆಗೆ ಸೇರುತ್ತದೆ. ನಾವೇನು ಸ್ನಾನ ಮಾಡಲಿಲ್ಲ ಬಿಡಿ.
ಕಲ್ಯಾಣಿಯ ಪಕ್ಕದಲ್ಲೇ ಸಾಲು ಸಾಲು ಸಣ್ಣ ದೊಡ್ಡ ದೇವಸ್ಥಾನಗಳಿವೆ. ಎಲ್ಲವೂ ಪಾಳು ಬಿದ್ದು, ಕೆಲವಂತೂ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಸ್ಥಾನ ಮಾಡಿದಂತಹ ಭಕ್ತ ಮಹಾಶಯರು ಈ ಸಣ್ಣ ಸಣ್ಣ ದೇವಸ್ಥಾನಗಳ ಗರ್ಭಗುಡಿಗೇ ಹೋಗಿ ತಮ್ಮ ಬಟ್ಟೆ ಬದಲಿಸುತ್ತಿದ್ದರು. ತಮ್ಮ ಒಳ ಉಡುಪುಗಳನ್ನು ಕಲ್ಲಿನ ನಂದಿಯ ಮೇಲೆ ಹಾಕಿ ಒಣಗಿಸುತ್ತಿದ್ದ ದೃಶ್ಯ ನಮಗೆ ಅಸಹ್ಯ ತರಿಸುತ್ತಿತ್ತು. ಎಲ್ಲಕ್ಕಿಂತ ತಮಾಷೆಯೆಂದರೆ, ಸ್ನಾನ ಮಾಡಿದ ಹೆಂಗಳೆಯರು ದೇವಸ್ಥಾನದ ಹಿಂದೆ ತಮ್ಮ ಬಟ್ಟೆ ಬದಲಿಸುತ್ತಿದ್ದರೆ, ಗಂಡಸರು ಗರ್ಭಗುಡಿಯ ಒಳಗೆ ಹೋಗಿ ಬಟ್ಟೆ ಬದಲಿಸುತ್ತಿದ್ದರು. ನಾವು ಗರ್ಭಗುಡಿಯ ಮುಂದೆ ಪ್ರಸಾದ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹೋಗಿ ಕೇಳಿದಾಗ ಆತ ಹೇಳಿದ್ದು, "ಈ ದೇವಸ್ಥಾನಕ್ಕೆ ಭಕ್ತರು ತುಂಬಾ ಜಾಸ್ತಿ. ಅದಕ್ಕೆ ಅವರನ್ನು control ಮಾಡೋದು ತುಂಬಾ ಕಷ್ಟ. ನೀವು office ನಲ್ಲಿ ಹೋಗಿ ವಿಚಾರಿಸಿ" ಎಂದ. ನಾವು ದೇವಸ್ಥಾನದ ಮುಂದೆ ಇದ್ದ office ನಲ್ಲಿ ನೋಡಿದರೆ ಕಸ ಗುಡಿಸುವವ ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
ಒಂದು ಸಮಾಧಾನದ ಸಂಗತಿಯೆಂದರೆ ನಮ್ಮ archeology department ನವರು ಈ ಸಣ್ಣ ದೊಡ್ಡ ದೇವಸ್ಥಾನಗಳ ಪ್ರತೀ ಕಲ್ಲಿಗೆ numbering ಕೊಟ್ಟಿದ್ದಾರೆ. ಅಂದರೆ ಈ ದೇವಸ್ಥಾನಗಳ ಪುನರುಜ್ಜೀವನ ಸಧ್ಯದಲ್ಲೇ ಇದೆ ಎಂದಾಯಿತು.
ನಮಗೆ ಈ ಕಲ್ಯಾಣಿಯ ಹಿಂದೆ ಸುಮಾರು ದೊಡ್ಡದಾದ ಬರಿಯ ದೇವಸ್ಥಾನದ ಅವಶೇಷಗಳೇ ತುಂಬಿವೆ ಖಾಲಿ ಬಯಲು ಪ್ರದೇಶ ಕಂಡು ಬಂತು. ಇಲ್ಲಿ ಏನಾದರೂ ಉತ್ಖನನ ನಡೆದರೆ ತುಂಬಾ ಮಹತ್ವದ್ದೇನಾದರೂ ಸಿಕ್ಕ ಬಹುದು.
ದೇವಸ್ಥಾನದ ಸುತ್ತಮುತ್ತ ಬಿದ್ದಿದ್ದ ಶಿಲ್ಪಗಳನ್ನು ನೋಡಿದರೆ ಗೊತ್ತಾಗುತ್ತದೆ, ಇದು ಹಿಂದೆ ತುಂಬಾ ಸುಂದರವಾದ ದೇವಸ್ಥಾನವಾಗಿತ್ತೆಂದು. ಬಹುಶಃ ಪರಕೀಯರ ಧಾಳಿಯಿಂದಾಗಿ ಇಂದಿನ ದುಸ್ಥಿತಿಗೆ ಇಳಿದಿರಬಹುದು. ಅಲ್ಲಿನವರನ್ನು ಕೇಳಿದಾಗ, ದುಷ್ಕರ್ಮಿಗಳಿಂದ ಈ ದೇವಸ್ಥಾನ ನಾಶವಾಯಿತೆಂದು ಹೇಳಿದರು. ಆದರೆ, ಆ ದುಷ್ಕರ್ಮಿಗಳು ಯಾರೆಂದು ಮಾತ್ರ ಹೇಳಲಿಲ್ಲ. ನಮಗನ್ನಿಸಿದ್ದು ಬಹುಮನಿ ಸುಲ್ತಾನರ ಕಾಲದಲ್ಲಿ (ಖಚಿತವಾಗಿ ನಮಗೆ ಗೊತ್ತಿಲ್ಲ) ಈ ದೇವಸ್ಥಾನದ ಅವನತಿ ಆಗಿದ್ದಿರಬೇಕು.
CA. SHIVA SHANKARA R. SHETTY
CHARTERED ACCOUNTNT
Mobile: +91 9035846043 Email: ca.srshetty@icai.org
www.casrshetty228359.in
No comments:
Post a Comment